ಚೆಲುವು Poem by PRAVEEN KUMAR Kannada Songs

ಚೆಲುವು

ಅದಾವ ಕ್ಷಣ ದಿನ ಜೊತೆಯಾದೆವೊ ನಾವು,
ಅದಾವ ಕಾಲಬಲ ಬಳಿ ತಂದವೊ ನಮ್ಮ,
ಹೃದಯ ಗಂಗಾವತರಣವೊ ಅದು, ಸಪ್ತ ಸಾಗರ ಸಂಕರವೊ,
ಹೊಸ ಭಾವ, ಹೊಸ ರೂಪ, ಹೊಸ ಲೋಕ ಉದ್ಭವಿಸಿ,
ನಾವು ಹಕ್ಕಿಗಳಾಗಿ ಗಗನ ತುಂಬ ವಿಹರಿಸಿದ ಭಾವ.

ಯಾವ ದೂರದಾಶೆಯನಿಟ್ಟು, ನನ್ನ ಬಳಿ ಬಂದು,
ಯಾವ ನೋವಿನ ಶಮನ ಬಯಸಿ ಸ್ನೇಹವನಿಟ್ಟೆ?
ಕನಸೊ, ನೆನಸೊ, ಎಂದರಿಯದೆ ಕಲ್ಲು ಮುಳ್ಳಲ್ಲಿ ನಿನ್ನ
ಎಳೆದೊಯ್ದಾಗ ನೀನು ತಲೆಬಾಗಿ ಬಂದೆ,
ಆಶೆ ಸ್ನೇಹದ ಗುಂಗಲ್ಲಿ ನೋವ ಮರೆತಿದ್ದೆ.

ನಿನ್ನ ಕಣ್ಣಿನ ಹೊಳಪು, ಆ ಹೊಳಪಿನೊಳಗಿನ ನೋವು,
ನೋವಿನೊಳಗಿನ ಸ್ನೇಹ, ಆಶೆ, ಅರಿಯಲಾಗದ ಬಯಕೆ
ನನ್ನೊಳಗಿನ ಬೆಂಕಿಗೆ ಎಣ್ಣೆ ಸುರಿದಿದ್ದ ದಿನದಲ್ಲಿ
ತುಫಾನಿನ ಸುಳಿಯಲ್ಲಿ ಹೃದಯ ಹಡಗು ಒಡೆದಾಗ,
ನಾ ನೋಡಿದ್ದ ನಿನ್ನ ನಿರ್ವರ್ಣ ಕಣ್ಣು ಕನಸಾಗಿ ಕಾಡುತಿದೆ.

ಹೇರಿದ ಭಾರವ ಹೊತ್ತು, ಕಣ್ಣೀರು ಧಾರೆಯನೊತ್ತಿ
ಎತ್ತು ಗತ್ತನು ತೋರಿ, ನೀ ಬಂಡಿ ಮುಂದೆ ಎಳೆದಿದ್ದೆ,
ಬೆವರು ಸಾಲಿನ ಮಧ್ಯೆ ರಕ್ತ ಕೋಡಿಯ ನೋಡಿ,
ಸೆರಗಲ್ಲೊರಸಿ ನೀನು ಮುಗುಳ್ನಗು ಎಸೆದಿದ್ದೆ,
ನಿನ್ನೊಳಗಿನ ಅಮೃತ ಚೆಲುವ ನೀ ಹೊರಗೆ ಚೆಲ್ಲಿದ್ದೆ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success