ಈ ಕಣ್ಣು ಮುಚ್ಚಾಲೆ ಏಕೆ,
ನಿನ್ನ, ನನ್ನ, ಮನಸ್ಸು, ಒಂದಾದ ಮೇಲೆ?
ಈ ಹುಸಿ ನಾಚುಕೆ ಏಕೆ,
ನಿನ್ನ, ನನ್ನ, ಬಯಕೆಗಳು ಒಂದಾದ ಮೇಲೆ?
ಜನಕೋಟಿ, ಸಾಗರದ ಮಧ್ಯೆ,
ತೇಲಾಡುವ, ಮನೋಹರ ದ್ವೀಪಖಂಡವು ನಾವು;
ರಭಸದಲೆ, ತೆರೆಗಳ ಮಧ್ಯೆ,
ಎಲ್ಲವನು ಮರೆತ, ಕರ್ಮಯೋಗಿಗಳು ನಾವು.
ಮರೆಯಲ್ಲಿ ನಿಂತು, ಈ ಕುಡಿನೋಟವೇಕೆ,
ಬಳೆಯ ಝಣಝಣದಿಂದ, ಮನಸೆಳೆಯುವೆ ಏಕೆ?
ತಪ್ಪಿ ಬಂದವರಂತೆ, ಬಳಿ ಬಂದು ಬೆಚ್ಚಿ,
ನಕ್ಕು ಸರಿಯುವೆ, ಹಿಂದೆ ಸೆರಗನ್ನು ಮುಚ್ಚಿ.
ಸಾವಿರ ಕಾರಣ ಕೊಟ್ಟು, ಎದುರೆದುರು ಬರುವೆ,
ನನ್ನ ತಿಳಿಯದವಳಂತೆ, ಮೌನವಾಗಿಯೇ ಇರುವೆ,
ನೀನೇನು ಮಾಡಿದರೂ, ಗಮನ ನನ್ನಲ್ಲೆ,
ಚೆಲುವೆ, ಇದನು ನಾನು, ಚೆನ್ನಾಗಿ ಬಲ್ಲೆ.
ನಿನ್ನ ಕಸಿವಿಸಿ, ಉದ್ವೇಗ, ನಾನು ತಿಳಿದಿರುವಾಗ,
ನನ್ನ ಅಕ್ಕರೆ, ಸ್ನೇಹದ ರಾಗ, ನೀನು ತಿಳಿದಿರುವಾಗ,
ಈ ಹುಸಿ ಉಪೇಕ್ಷೆ, ನಟನೆ, ನನ್ನಲ್ಲಿ ಏಕೆ,
ಈ ಆಚಾರ, ನಿಯಮಗಳು, ನಮ್ಮಲ್ಲಿ ಬೇಕೆ?
ನಿನ್ನೊಳಗಿನ ಭಾವಗಳ, ನೀನೆಷ್ಟು ಮರೆ ಮಾಚಿದರು,
ನಿನ್ನ ಕಣ್ಣಿನ ಝಳೆ, ನಿನ್ನ ಹಾವಭಾವ ನೋಟ,
ನನ್ನೆದುರು ಬಿಚ್ಚುತ್ತಿದೆ, ನಿನ್ನಂತರಂಗದ ಆಟ;
ನಿನ್ನೊಳಗೆ ನಡೆಯುವ ತುಮುಲ, ನಾನು ಬಲ್ಲೆ, ನಲ್ಲೆ.
ಎಲ್ಲವನು ಬದಿಗೊತ್ತಿ, ನನ್ನೆದುರು ಬಾರೆ,
ಮನದ ತುಮುಲವನು, ಮನಬಿಚ್ಚಿ ತೋರೆ;
ನಾನು, ನೀನು, ಸೇರಿ, ಒಂದಾಗಿ ಬೆರೆಯುವಾಗ,
ನೋಡುತ್ತಿರು ಲೋಕ, ಸುಖ ಸಂಭ್ರಮದ ಸ್ವರ್ಗ.
ನಿನ್ನೀ ಬಾಹ್ಯ ಆಢಂಬರ, ನನಗಂತೂ ಬೇಡ,
ಹೀಗೆ, ಕಣ್ಣುಮುಚ್ಚಾಲೆುಂದ, ನನ್ನ ಕಾಡಬೇಡ;
ನಿನ್ನ ಸಮವಸ್ತ್ರಗಳ ಬಿಚ್ಚಿ, ಹಸಿಯಾಗಿ ಹೊರಗೆ ಬಾ,
ಹೃದಯಗಳು ಹೆಣೆದ, ಆ ಸಂಬಂಧ ಹೊತ್ತು ತಾ.
This poem has not been translated into any other language yet.
I would like to translate this poem