ಹಿಡಿದು ಅರೆದು ಕುಡಿಯುವಾಸೆ,
ಬಿಚ್ಚಿ ತೆರೆದು ಹಿಡಿಯುವಾಸೆ;
ಹಲವು ಕೋಟೆಗಳೊಳಗೆ ಕೂತು ಛೇಡಿಸುವ
ಕಳಿತ ಹಣ್ಣನ್ನು ಬಗೆದು, ಬಗೆದು, ಕೈತುಂಬ ಬಾಚಿ,
ಬಾುತುಂಬ ಚಪ್ಪರಿಸುವ ಮಹದಾಸೆ ನನಗೆ.
ಕಣಿವೆಗಳಿಗಿಳಿದು, ದಿನ್ನೆಗಳನ್ನೇರಿ,
ನನ್ನ ಪತಾಕೆಯನ್ನಲ್ಲಿ ಊರಿ ಬಿಟ್ಟು
ಮಣ್ಣಿನ ತುಂಬ ಹೊರಳಾಡುವಾಸೆ;
ಮಣ್ಣು ಕೆಸರು ಮೈ ಮೆತ್ತಿ
ಮಣ್ಣುವಾಸನೆ ಹೀರಿ ಹೀರಿ
ಮಣ್ಣಿನಲ್ಲಿ ಮಣ್ಣಾಗುವ ಆಸೆ ನನಗೆ.
ಅಲಂಕಾರದ ಸಿಪ್ಪೆ ಹೊದಿಕೆಗಳೇಕೆ,
ಹಣ್ಣು ಕಳಿತಿರುವಾಗ, ರಸವು ಒಸರುತ್ತಿರುವಾಗ,
ಶಿವಪೂಜೆಯಲಿ ಕರಡಿಯ ಬಿಟ್ಟಂತೆ;
ಅಗ್ನಿಹೋತ್ರಿಗೆ ಹೋಮಕುಂಡದ ಚಿಂತೆ,
ಹಸಿದ ಹೊಟ್ಟೆಗೆ ಆಹಾರದ ಚಿಂತೆ,
ಬಯಕೆ, ಬಯಸಿದುದು ಜೊತೆಯಾಗಬೇಕು,
ಆಗ ಹೂವಿಗೂ ತೃಪ್ತಿ, ಹೂವಂಬನಿಗೂ ತೃಪ್ತಿ,
ಹುಚ್ಚಾಬಟ್ಟೆ ಬಡಿಯುವ ಹೃದಯಕೂ ತೃಪ್ತಿ;
ಹೋಮದ ಬಿಸಿಯಾರಿ
ಎಲ್ಲೆಲ್ಲೂ ಶಾಂತಿ, ಮೌನ, ತೃಪ್ತನಿದ್ರೆ.
ಕೋಟೆಗೋಡೆಗಳನೇರಿ ಒಳಗೆ ಸೇರಬೇಕು,
ಅಥವ ಹುಳದಂತೆ ತೆವಳಿ ಒಳ ನುಸುಳಬೇಕು,
ಹೇಗಾದರೂ ಗುರಿ ಸೇರಬೇಕು,
ಮಣೆಹಾಕಿ, ಕಾಲು ಮಡಚಿ, ಭೋಜನಕೆ ಸಿದ್ಧನಾಗಿ
ಬಾು ತುಂಬ ಸಿಹಿ ಪಾಯಸ ಕುಡಿಯಬೇಕು;
ಕೈಯನ್ನು ನೆಕ್ಕಿ ನೆಕ್ಕಿ ಸವಿಯಬೇಕು
ಹಸಿವು ತಣಿಯುವವರೆಗೆ,
ಬಾಯಾರಿಕೆ ಇಂಗುವವರೆಗೆ,
ಆಶೆಯ ಬೆಂಕಿ ನಂದುವವರೆಗೆ.
ಬೇಸುಗೆಯ ಬೆಂಕಿಯಲಿ ಬೆಂದ ನೆಲಕೂ
ಇದು ಗಂಗಾವತರಣದಂತೆ,
ಕಣ್ಣಿನಲ್ಲಿ, ಹೃದಯದಲ್ಲಿ,
ಹೀರಿ ಹೀರಿ ಹಿಂಗಿಸುವ ಆಶೆ;
ಮುಜುಗರದ ಬೆನ್ನಲ್ಲಿ
ಬೆಂಕಿ ಕಟ್ಟಿಡುವ ಹೆಬ್ಬಯಕೆ,
ಕೊನೆಗೆ ಮೈ ಮನ ಸುಟ್ಟುಕೊಂಡು
ಬಯಲಾಗುವ ದುರಂತ ನಗ್ನಸತ್ಯ.
ಯಾಕೀ ದೊಂಬರಾಟ,
ಹಗ್ಗ ನಡಿಗೆ, ಸಮತೋಲನ?
ಧ್ರುವೀಕರಣ ತೊಲಗಬೇಕು,
ಧ್ರುವ ಧ್ರುವ ಸೇರಬೇಕು,
ನಿಸರ್ಗ ತುಂಬಿ ಮೆರೆಯಬೇಕು,
ಹಸಿವು ಆಶೆ ಕೈಗೂಡಬೇಕು;
ಇದೇ ತಾನೆ ಸಹಜ ಧರ್ಮ?
ಆಚೆ ಆಶೆ, ಈಚೆ ಆಶೆ,
ಮಧ್ಯೆ ಕೃತಕ ಕಟ್ಟು ಕಟ್ಟಿ
ಅಶಾಂತಿ ಅತೃಪ್ತಿ ಬೆಳೆಸಬೇಕೆ?
ಕೋಟೆ ಒಡೆದು, ಕಟ್ಟು ಹಾರಿ,
ನನ್ನ ಗುರಿಯ ಸೇರುವೆ,
ಬಾಚಿ ಹಿಡಿದು, ತೆರೆದು, ಬಿಚ್ಚಿ
ಬೇಕಾದಂತೆ ಅನಭವಿಸುವೆ;
ಕೈಲಿ ಹಿಡಿದು, ಅರೆದು ಅರೆದು,
ಸುರಿವ ರಸವ ಕೂಡಿ ಹಿಡಿದು
ಬೊಗಸೆಯಿಂದ ಕುಡಿಯುವೆ;
ಸುರಿವ ತಂಪು ರಸದ ಧಾರೆ
ಹಸಿದ ದೇಹದ ಬಿಸಿಯ ತಣಿಸದೆ
ನನ್ನ ಗೂಡಿಗೆ ಮರಳೆನು;
ಹಿಡಿದು, ಬಗೆದು, ಸಿಗಿದು ತೂರಿ,
ಸ್ವಚ್ಛಂದವಾಗಿ ಹಾರಿ ಜಾರಿ,
ತಿಕ್ಕಿ ತಿಕ್ಕಿ ಬೆಂಕಿ ಗೀರಿ,
ಕಾಡ್ಗಿಚ್ಚು ಹಬ್ಬಿ ಮೈಲುದ್ದ ಸುಟ್ಟು,
ಶಕ್ತಿ ಹೃಸ್ವ ಜೀವವಾಗಿ
ತೃಪ್ತಿಯಿಂದ ಮಲಗುವೆ.
This poem has not been translated into any other language yet.
I would like to translate this poem