ಆಕಾಶದೆತ್ತರ ಅವಳು,
ಅಲೌಕಿಕದಾಳ ಅವಳು;
ಏರೇರಿದಷ್ಟು ಎತ್ತರ,
ಅವಳಂತರಂಗ, ಧೀಶಕ್ತಿ,
ಇಳಿುಳಿದಷ್ಟು ಆಳ;
ಛದಿತಳವಿಲ್ಲದ ಔನ್ನತ್ಯ,
ಕೊನೆಮೊದಲಿಲ್ಲದ ವೈಶಾಲ್ಯದ
ತನ್ನೆಲ್ಲೆಯನೆಂದೂ ಮೀರದ
ಆತ್ಮಸಾಕ್ಷ್ಯಿಯೆ ಅವಳು.
ಅವಳು ಕಾಲಿಟ್ಟಲ್ಲೇ ನೆಲ,
ನಿರ್ಧರಿಸಿದ್ದೇ ಛಲ, ಬಲ;
ಒಂದೊಂದೆ ಚಿಪ್ಪು ತೆರೆದಂತೆ,
ಒಂದೊಂದೆ ಪರದೆ ಸರಿದಂತೆ,
ಹೊರಗಿನ ಪರೆ ಕವಚಿದ ಹಾಗೆ
ಕೌತುಕಗಳ ಪುಂಖಾನುಪುಂಖವೆ
ಅವಳಾಂತರ್ಯದೊಂದೊಂದು ನೋಟ -
ಅವಳ ತೀವ್ರ, ತೀವ್ರತರ, ತೀವ್ರತಮ
ಪ್ರಚಂಡ ಪ್ರಖರ ಪ್ರೇಮ ಪ್ರಸ್ಥಾನ.
ಅವಳಚಲ ಪ್ರೀತಿಯ ಧಾರೆ,
ಆ ಪ್ರೀತಿ ಪ್ರಖರತೆಯ ತದಾತ್ಮ್ಯ,
ಅವಳಸ್ಖಲಿತ ಪ್ರೀತಿಯ ಸತ್ಯ -
ಒಂದೊಂದೆದುರು ತೆರೆದು ನಿಂತಾಗ
ಹೆಜ್ಜೆಹೆಜ್ಜೆಗೂ ರೋಮಾಂಚನ ನನಗೆ;
ಆ ಪ್ರೀತಿ ನಿಜವೊ, ಕನಸು ಕಲ್ಪನೆಯೊ,
ಲೌಕಿಕÀದಲಿ ಹೇಗೆ ದಿವ್ಯಲೌಕಿಕ ಬಂತೆಂಬ
ವಿಸ್ಮಯ ಸಂಶಯಗಳ ಮೊರೆತದಲೂ
ನನ್ನತುಲ ಭಾಗ್ಯದಲಿ ವಿನಮ್ರನಾದೆ.
This poem has not been translated into any other language yet.
I would like to translate this poem