ಭರವಸೆಯ ಗಾಲಿಯ ಮೇಲೆಯೇ ನಡೆವ ರಥ
ನನ್ನೀ ಬರಡು ಜೀವನವಾಯಿತಲ್ಲ,
ಭವಿಷ್ಯದಲೇ ಚಿತ್ತವನಿಟ್ಟು ಸಾಂಪ್ರತ ಮರೆದ
ಮೂಢ ತಿಳಿಗೇಡಿಯೆ ನಾನಾದೆನಲ್ಲ.
ನಾಳೆ ನಾಳೆಯೆಂದು ಜಾರಿ ಮುಂದೆ ನೆಗೆವುದೆ
ಭರವಸೆ ಪ್ರಸ್ಥಾನದ ವಿಧಿ ವಿಧಾನ,
ಕೈಯಳತೆಯ ಮೀರಿ ನಿತ್ಯ ಮುಂದೋಡುವುದು
ಭವಿಷ್ಯದಮೂರ್ತ ಸ್ಥಿತಿಯಾಧಾರ.
ಕತ್ತಲೆಯ ಬಿಟ್ಟು ನಿತ್ಯ ಬೆಳಕನ್ನರಸುವುದು
ಜೀವನದ ಧರ್ಮ, ಸ್ಠೃಷ್ಠಿ ನಿಯಮ;
ಬೆಳಕು ನಶ್ವರ, ಕನಸು, ಕೈಗೆಟುಕದ ಬುತ್ತಿ,
ಆಶೆ ಗಾಳವನಿಟ್ಟೆಳೆಯುವ ಸುಪ್ತ ಶಕ್ತಿ.
ಗತವೈಭವವಾದ ನನ್ನ ಜೀವನದವಶೇಷಗಳಲಿ,
ಘನೀಕೃತ ಕತ್ತಲಿನ ಸಾಂಪ್ರತದಲ್ಲಿ
ಭವಿಷ್ಯದ ಭರವಸೆಯೇ ನನ್ನರ್ಮೂತ ಸೊತ್ತು,
ನನಗುಳಿದಿರುವ ಬೆಳಕು, ನನ್ನ ದಿಕ್ಕು.
ದೂರದಲ್ಲೆಲ್ಲೋುದೆ ನನ್ನ ಜೀವನದ ಲಕ್ಷ್ಯ;
ಇಂದಲ್ಲ ನಾಳೆ ಸೇರುವ ಹಾರೈಕೆ
ಹಗಲು ಕಳೆದುಳಿದ ಸಂಜೆ ಕಾಲಿಟ್ಟ ಮೇಲೂ
ನಡೆಸುತ್ತಿದೆ ನನ್ನ ಕೈಹಿಡಿದು ಮುಂದೆ.
ಬೆನ್ನ ಹಿಂದೆ ಬರಿ ಕತ್ತಲು, ಮುಂದೆ ಬೆಳಕೆಂದು
ಓಡಿದ್ದೇ ನನ್ನ ಜೀವನದ ಪಯಣ,
ಕತ್ತಲೂ ಇಲ್ಲ, ಬೆಳಕೂ ಇಲ್ಲ, ಜೀವನವೆ ಬರಿ ಛಾಯೆ -
ಈ ಸತ್ಯ ಮೊದಲೇಕೆ ನನಗೆ ತಿಳಿಯಲಿಲ್ಲ?
ಭವಿಷ್ಯತ್ತು ನನ್ನ ದಾಟಿ ಗತಕಾಲ ಸೇರಿದ ಹಾಗೆ,
ಭರವಸೆಯ ನಾವೆ ಮುಂದೆ ಸರಿದಾಗ,
ಹತಾಶೆಯುಬ್ಬರದಲ್ಲೂ ಮತ್ತೆ ಮತ್ತೆ ಸಾವರಿಸಿಕೊಂಡು
ಮುಂದಿದ್ದ ಬೆಳಕನೆ ನಂಬಿ ಈಜಿಬಿಟ್ಟೆ.
ನಾನೇನೋ ಈಜಿಬಿಟ್ಟೆ, ಜೀವನದ ಸಂಜೆ ಮುಟ್ಟಿಬಿಟ್ಟೆ,
ನನ್ನನ್ನೆ ನಂಬಿದ್ದ ನನ್ನ ಲಕ್ಷ್ಯವನೇ ಮರೆತೆ;
ಭರವಸೆಯ ಬೆಳಕನ್ನು ನನ್ನೊಡನೆ ನಂಬಿ ನಡೆದಿದ್ದ
ನನ್ನವಳ ಎಳೆ ಬದುಕನ್ನು ಚಿಗುರಿಸದೆ ಬಿಟ್ಟೆ.
This poem has not been translated into any other language yet.
I would like to translate this poem