ಆತ್ಮ ತೃಪ್ತಿ Poem by PRAVEEN KUMAR Kannada Songs

ಆತ್ಮ ತೃಪ್ತಿ

ಯಾವ ವಿಧಿುದು ನಮ್ಮನ್ನು ಕ್ರೂರ ವ್ಯೂಹದಲ್ಲಿಕ್ಕಿ
ನಮ್ಮ ಒದ್ದಾಟವನು ನೋಡಿ ನಗುತಲಿದೆಯೊ,
ಯಾವ ಆಟವಿದು ನಮ್ಮನ್ನು ಸಜೀವ ಒಡಪಿನಲ್ಲಿಕ್ಕಿ
ನಮ್ಮನ್ನೀ ರೀತಿ ಅಹೋರಾತ್ರಿ ಹಿಂಸಿಸುತ್ತಿದೆಯೊ.

ಒಂದೆ ಕಾಂಡದ ನಿಕಟ ಟೊಂಗೆಗಳು ನಾವು,
ಒಂದೆ ಝರಿಯಿಂದ ಕವಲೊಡೆದ ಹರಿತ;
ಮತ್ತೇಕೆ ಈ ದ್ವಂದ್ವ, ಭಿಡೆ, ಈ ಅಪಶ್ರುತಿಯು
ನಿನ್ನ ನನ್ನ ಈ ರೀತಿ ಅರೆಯುತ್ತಿದೆಯೊ.

ನೀನಲ್ಲಿ, ನಾನಿಲ್ಲಿ, ಬೆಂಕಿಯ ಅಂತರ ಮಧ್ಯೆ,
ನಿನ್ನ ನನ್ನ ಮಧ್ಯೆ ಸುನಾಮಿಯ ದೈತ್ಯ ಮೊರೆತ;
ಇರುವವರೆಗೆ ನಾವು ಇನ್ನೊಬ್ಬರ ಬಿಟ್ಟಿರುವವರಲ್ಲ,
ನಮ್ಮಂತರ ನಮ್ಮನ್ನು ಹತ್ತಿರ ಬರಗೊಡುವುದಿಲ್ಲ.

ಹತಾಶೆಯು ಪ್ರಮಾದಗಳ ಹೆದ್ದಾರಿ, ತವರೂರು,
ನಿರಾಶೆಯ ನೆರೆತದಲಿ ಕಣ್ಣು ಕೆಡಿಸುವ ನೋವು;
ವಿಯೋಗದ ನೋವು ಭರದಲ್ಲಿ ತತ್ತರಿಸಿದ ನಾವು
ಪ್ರಪಾತಗಳ ಗುಂಟ ಹೆಜ್ಜೆಯನು ಇಟ್ಟದ್ದೆ ಹೆಚ್ಚು.

ನೋವಿನತಿಶಯದಲ್ಲಿ ಬೆಂಕಿಕುಂಡಕೆ ನೆಗೆದು
ಮೈ ಕೈ ನೀನು ಸುಟ್ಟುಕೊಂಡದ್ದೆ ಬಂತು,
ಉರಿಯ ತಡೆಯದೆ ಮತ್ತೆ ನೀರಿನಾಳಕೆ ಹಾರಿ,
ನನಗಾಗಿ ಮೇಲೆದ್ದು ಕಾಯುವುದೆ ಬಾಳು.

ಬೇಲಿಯನು ಜಿಗಿದು ಮತ್ತೆ ನಾವು ಕೂಡುವ ಆಶೆ,
ಸಮ್ಮಿಲನದಲ್ಲಿ ನಮ್ಮತನವನನುಭವಿಸುವ ಆಶೆ;
ಆಶೆ ಆಶೆಯಾಗಿಯೆ, ವಿಧಿ ದುರ್ವಿಧಿಯಾಗಿ,
ಇನ್ನೆಷ್ಟು ದೂರ ದೂರ ನಡೆಯಬೇಕು ನಾವು?

ನಮ್ಮ ಮಧ್ಯದ ಬೆಂಕಿ ನಂದಿಹೋಗುವವರೆಗೆ,
ಸುನಾಮಿಯ ಮೊರೆತ ಕುಗ್ಗಿ ಹೋಗುವವರೆಗೆ
ನಮ್ಮ ಬಯಕೆಯ ಬೀಜ ಮೊಳಕೆಯೊಡೆಯದಲ್ಲ,
ವಿಧಿಯ ಸ್ನೇಹದ ಹಸ್ತ ನಮ್ಮ ಬೆಸೆಯುವುದಿಲ್ಲ.
ವಿಲವಿಲನೆ ಒದ್ದಾಡಿ ನೀನು ಪಟ್ಟ ಆ ಪಾಡು,
ನಿನ್ನ ನೋವನು ಕಂಡು ನಾನುಂಡ ನೋವು -
ನಮ್ಮ ಜೀವನದುದ್ದ ಬರೆ ತೀವ್ರ ನೋವು ನೋವು,
ಆದರೂ ಕಂಡೆವು ಕೂಡಿ ಅಮೃತತೆಯ ಆತ್ಮ ತೃಪ್ತಿ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success