ಅಂದು.....
ಯವ್ವನದ ಆಕಾಶದಲಿ ಕಾಮನ ಬಿಲ್ಲಿನಂತೆ ಬಂದು
ಹೊಸ ಹೊಸ ಬಣ್ಣಗಳ ಹೊಸ ಲೋಕ ತೆರೆದು ಕೊಟ್ಟೆ;
ನನ್ನೊಳಗಿನ ದಿಗಂತದ ಸೀಮೆಯನು ವಿಸ್ತ್ರತಗೊಳಿಸಿ,
ಹೊಸ ದಿಕ್ಕು, ದ್ಠೃಗಳ ಹೊಸ ವ್ಯಾಪ್ತಿ ಒದಗಿಸಿ ಕೊಟ್ಟೆ;
ಅದೇ ಅರಳುವ ತಾವರೆಯ ಪ್ರೀತಿಯಿಂದ ಎದೆಗೊತ್ತಿ
ನಿನ್ನೆದೆ ಬಡಿತ ಸ್ವಾದದ ಸಮಿಂದ ಪ್ರಸ್ಫುಟಗೊಳಿಸಿ
ಬದುಕಿಗೇ ಹೊಸ ಅರ್ಥ, ಸೌಂಧರ್ಯ, ಬೆಳಕು ಕೊಟ್ಟೆ;
ಕಿತ್ತುಬಿದ್ದಿದ್ದ ಹೂವನ್ನು ನೆಲದಿಂದೆತ್ತಿ ತಲೆಮೇಲೆ ಮುಡಿದು,
ಹೊಸ ಬಂಧ ಸಂಬಂಧ ನೀನು ಬಿಗಿಗೊಳಿಸಿ ಬಿಟ್ಟೆ;
ನಿನ್ನ ಹೃದಯದ ಗುಡಿಯಲ್ಲಿ ನನ್ನನಿಟ್ಟು, ದೀಪ ಹಚ್ಚಿ,
ನಿನ್ನಾತ್ಮದ ದಿವ್ಯ ಪ್ರಭೆಯಿಂದ ಆರತಿಯೆತ್ತಿ ಪೂಜಿಸಿದೆ;
ನಿನ್ನ ಮಲ್ಲಿಗೆ ಕಂಪು, ಬೆಳದಿಂಗಳ ಹಿತ ತಂಪು, ಇಂಪಿನಲಿ
ಪುಳಕಿತಗೊಂಡವನೆ ನನ್ನೊಳಗೆ ಪ್ರತಿಷ್ಠಾಪಿಸಿದೆನು ನಿನ್ನ;
ಜೀವಜೀವವು ಸೇರಿ ಬೆಸೆಯುವ ಅಮೂರ್ತ ಸಂಬಂಧ,
ಅದು ಮುರಿಯದ ಮುಗಿಯದ ಜನ್ಮಾಂತರದ ಸಂಬಂಧ.
ಮುರಿಯದ ಮುಗಿಯದ ಬಂಧ ವಿಧಿ ವಿರೋಧವೋ ಏನೋ,
ಸುನಾಮಿಯ ದೈತ್ಯ ಅಲೆಗಳ ನಿರಂತರ ಹೊಡೆತವನುಂಡು,
ಭೀಕರ ಸುಳಿಯ ಕಣ್ಣಿನಲಿ ಸಿಕ್ಕಿ ನೀನೆಲ್ಲೋ ಜಾರಿಹೋದೆ,
ಜೀವನ ಪರ್ಯಂತ ಕಣ್ಣೀರಿನಲಿ ನನ್ನ ಬಿಟ್ಟು ದೂರ ಹೋದೆ.
ಇಂದು.....
ಕಣ್ಣೀರಿನ ಮಸುಕಿನ ಮಧ್ಯೆ ನಿನ್ನ ಹುಡುಕಿ ಸೋತಿದ್ದಾಗ,
ಕಾಲ ಮೀರಿದ್ದು, ನೀನಿನ್ನು ಬರಲಾರೆಯೆಂದು ತಿಳಿದಾಗ
ಮಿಂಚಾಗಿ ಎಲ್ಲಿಂದಲೋ ನನ್ನ ಬಳಿ ನೀನು ತೂರಿಬಂದೆ,
ಏನಾುತೆಂದರಿಯುವ ಮೊದಲೆ ನನ್ನನ್ನು ಆವರಿಸಿ ಬಿಟ್ಟೆ;
ಅಂದು ಇಂದೆಂದು, ಅವಳು ಇವಳೆಂದು ತಿಳಿಯದೆ ನಾನು
ಕಣ್ಣುಮುಚ್ಚಾಲೆಯಾಡಲು ನೀನು ಹಿಮಾಲಯವಾದೆ;
ಚೈತ್ರ ತಪಸ್ಸಿನ ಘೋರ ಸಾಧನೆಯಲ್ಲಿ ನನ್ನ ಗೆದ್ದು
ಅಂದು ಇಂದೆಂದು, ಅವಳು ಇವಳೆಂದು ಸಾಕ್ಷಾತ್ಕರಿಸಿ ಬಿಟ್ಟೆ;
ನಿನ್ನನ್ನಾದರಿಸಿ ಹೃದಯ ಗುಡಿಯಲ್ಲಿ ನಾನು ಬಿಗಿದು ಬಿಟ್ಟೆ,
ದಿನರಾತ್ರಿ ಕೈ ಮುಗಿದು, ಪೂಜಿಸಿ, ನಿನಗೆ ನೈವೇದ್ಯವಿಟ್ಟೆ;
ನಿನ್ನ ನನ್ನ ಪ್ರೀತಿಯಬ್ಬರದಲ್ಲಿ ನಾವು ಒಂದಾಗಬೇಕಿತ್ತು,
ನಿನ್ನ ನನ್ನ ಪ್ರೀತಿಯಲಿ ಲೋಕ ಸ್ವರ್ಗ ಮೀರಬೇಕಿತ್ತು;
ಮುರಿಯದ ಮುಗಿಯದ ಬಂಧ ವಿಧಿ ವಿರೋಧವೋ ಏನೋ,
ಕಳ್ಳಕಾಕರ ಕೂಟ ಅಮವಾಸ್ಯೆಯ ರಾತ್ರಿ ಕನ್ನವಿಕ್ಕಿ ಗುಡಿಗೆ
ನಿನ್ನ ಹೆಡಮುರಿಕಟ್ಟಿ, ಕಣ್ಣುಕಟ್ಟಿ ಕದ್ದೊಯ್ದಿತು ಎಲ್ಲೋ.
ನೀನಲ್ಲಿ ನನ್ನ ಧ್ಯಾನದಲಿ, ನಾನಿಲ್ಲಿ ನಿನ್ನ ಧ್ಯಾನದಲಿ
ಹತಾಶೆಯ ವ್ಯೂಹದ ಮಧ್ಯೆ ದಿನಕಾಯುತ್ತಿರುವೆವು;
ಜೀವಜೀವವು ಸೇರಿ ಬೆಸೆಯುವ ಅಮೂರ್ತ ಸಂಬಂಧ,
ಇದು ಮುರಿಯದ ಮುಗಿಯದ ಜನ್ಮಾಂತರದ ಸಂಬಂಧ.
This poem has not been translated into any other language yet.
I would like to translate this poem