ಗುಲಾಬಿವನಕೆ ಬಂದ ಅತಿಥಿಯೆ Poem by PRAVEEN KUMAR Kannada Songs

ಗುಲಾಬಿವನಕೆ ಬಂದ ಅತಿಥಿಯೆ

ಗುಲಾಬಿವನಕೆ ಬಂದ ಅತಿಥಿಯೆ,
ಚೈತ್ರ ಮಾರುತನ ಸೌಗಂಧವು ಪುಷ್ಪಗಳ ನಗಿಸುತ್ತಿರುವಾಗ,
ಬಣ್ಣಗಳ ರಾಶಿ ಪರಾಗಗಳಾಗಿ ವನತುಂಬ ನರ್ತಿಸುತ್ತಿರುವಾಗ,
ಹಿತೋಷ್ಣದ ಚುಂಬನದಿಂದ ಚಿಗುರೆಲೆಗಳು ಹಚ್ಚಹಸುರಾದಾಗ,
ಗುಲಾಬಿಯ ಸುಸ್ವಾದ ಸ್ಪರ್ಷ ಚುಂಬನವನ್ನರಸುತ್ತ
ಜವ್ವನದ ಚೈತ್ರರಥದಲ್ಲಿ ಮಧುಕುಂಭವನು ಹೊತ್ತು
ಗುಲಾಬಿವನಕೆ ಬಂದ ಅತಿಥಿಯೆ,
ನವನವೀನ ವರ್ಣಬೆಡಗಿನ ಗುಲಾಬಿ ನಿಮಂತ್ರಣವನು ಮರೆತು
ಬಡ ಮಲ್ಲಿಗೆಯ ಸ್ವಾದಕ್ಕೇಕೆ ಮರುಳಾಗುವೆ?

ಅದು ಒಂಟಿ ಮಲ್ಲಿಗೆ ಬಳ್ಳಿ,
ಕೊಬ್ಬಿದ ಭವ್ಯ ಗುಲಾಬಿಯ ವರ್ಣಗೊಂದಲದ ಮಧ್ಯೆ
ತಗ್ಗಿಬಗ್ಗಿ ಹರಿದ ಅಚ್ಚಬಿಳಿ ಮಲ್ಲಿಗೆಯ ಬಳ್ಳಿ,
ಗುಲಾಬಿಯ ಎದೆಸೆಟೆದ ಮೋಡಿ, ಮುಳ್ಳಿಗೆ ಸರಿಸಾಟಿ ನಿಲ್ಲದ ಕುಡಿ;
ನೀನೇಕೆ ಬೆಡಗಿನ ಸುಂದರ ಸಾಮ್ರಾಜ್ಯವ ಮರೆತು
ಮಲ್ಲಿಗೆಯ ಸರಳ ಗುಡಿಗೆ ಮರುಳಾದೆ,
ಗುಲಾಬಿವನಕೆ ಬಂದ ಅತಿಥಿಯೆ,
ಜವ್ವನದ ಚೈತ್ರರಥದಿಂದಿಳಿದು, ಮಧುಧಾರೆ ಸುರಿದು,
ಮಲ್ಲಿಗೆಯ ಬಳ್ಳಿಯನು ಚೈತ್ರದಿಂದೇಕೆ ಸಿಂಗರಿಸಿದೆ?

ನಿನ್ನ ಸ್ಪರ್ಷದ ಮೋಡಿಯಲಿ
ಚಿಗುರಿದ ಮಲ್ಲಿಗೆಯು ಚೆಲ್ಲಿತು ಸುರ ಸೌಗಂಧ,
ನಾಚುತ್ತ, ಅರಳುತ್ತ, ಚೈತ್ರಸುಖದ ಕನಸು ಕಾಣುತ್ತ,
ಜವ್ವನದ ನಿನ್ನ ಚೈತ್ರರಥವನ್ನು ತನ್ನಿಂದಲಕರಿಸಲು ಬಯಸಿತ್ತು;
ಅರೆಚಣವೂ ನಿಲ್ಲದೆ ನೀನು ದೂರ ಬಲುದೂರ ಸರಿದಾಗ,
ನೀನೇ ಚಿಗುರಿದ ಚೈತ್ರವು ತಾನಾಗಿ ಮುರುಟಿತು,
ಗುಲಾಬಿವನಕೆ ಬಂದ ಅತಿಥಿಯೆ,
ಹೇಳು, ನೀನೇ ನೀಡಿದ ಆ ಜೀವ, ಕನಸುಗಳನು,
ನೀನೇ ಸುರಿದ ಆ ಮಧುಸಾರವನು ನೀನೇ ಏಕೆ ತಡೆಹಿಡಿದೆ?

ಇದು ಒಂದೆ ಸಂವತ್ಸರದ ಕತೆಯಲ್ಲ,
ಪ್ರತಿ ಬಾರಿಯ ನಿರ್ಧಿಷ್ಠ ಪಾರಂಪರ್ಯ ವಿಧಿ;
ಚೈತ್ರಸ್ಪರ್ಷದ ಉತ್ಸಾಹದಲಿ ವಸಂತನು ಬಣ್ಣ ಬಡೆದಾಗ,
ಕೋಗಿಲೆಯ ಕಂಠದಿ ಮಧು ಅನವರತ ಸುರಿದಾಗ,
ಜವ್ವನದ ಚೈತ್ರರಥದಲಿ ನೀನು ಮಧುಕುಂಭ ತಂದು
ಅಚ್ಚಬಿಳಿ ಮಲ್ಲಿಗೆಯ ಬಳ್ಳಿಯನು ಚಿಗುರಿಸುವೆ,
ಗುಲಾಬಿವನಕೆ ಬಂದ ಅತಿಥಿಯೆ,
ಮತ್ತೆ ಭರತನಂತೆ ಎಲ್ಲ ಮರೆತು ಬಲುದೂರ ಸರಿದು
ಮಲ್ಲಿಗೆಯ ಸರಳ ಗುಡಿಯಿಂದ ಬೆಳಕನ್ನೇಕೆ ನಂದಿಸುವೆ?

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success