ನಿನ್ನ ನನ್ನ ಪ್ರೀತಿ ಬಂಧ Poem by PRAVEEN KUMAR Kannada Songs

ನಿನ್ನ ನನ್ನ ಪ್ರೀತಿ ಬಂಧ

ನಿನ್ನ ನೆನಪು, ಅದರ ಹೊಳಪು, ನನ್ನಂತರಂಗದೊಳಗೆ ಹೊಸೆದು,
ನಿನ್ನ ನನ್ನ ಸಂಬಂಧ ತಂತು ಹೃದಯ ಪ್ರಾಣದೊಡನೆ ಬೆಸೆದು,
ಜೀವಜೀವದಲ್ಲಿ ನನ್ನ ಹುರುಪು ಚಿಲುಮೆಯಾದೆ ನೀನು;
ಎಷ್ಟು ದೂರವಿರಲಿ ನೀನು, ಅದೆಷ್ಟು ಕಾಲ ನಮ್ಮ ನಡುವೆ
ಅದೃಷ್ಟದಾಟ, ವಿಧಿಯು ಕ್ರೂರ ನೃತ್ಯವಾಡಿ ದಣಿಸಲಿ,
ನಿನ್ನ ನನ್ನ ಬೆಸೆದ ಬಳ್ಳಿ ದೈತ್ಯ ರೂಪದಲ್ಲಿ ಬೆಳೆದು
ಸಡಿಲುಗೊಳದ ಸುರುಳಿಯಾಗಿ ನಿನ್ನ ನನ್ನ ಬಿಗಿವುದು.

ನಿನ್ನ ನನ್ನ ನಡುವೆ ಹರಿವ ಪ್ರೀತಿಯೆಂಬ ಪವಿತ್ರ ಗಂಗೆ
ಕಾಲ ದೂರ ಮೇರೆಮೀರಿ, ಭೋರ್ಗರೆದು ನುಗ್ಗಿ ಹರಿಯುವಾಗ,
ನಮ್ಮ ನಡುವೆ ಸೇತುವಾಗಿ, ನಮ್ಮ ಭದ್ರ ಬೆಸೆಯುವಾಗ,
ಯಾಕೆ ಚಿಂತೆ ಭಯವು ನಮಗೆ, ಯಾಕೆ ತುಂಬು ವಿಷಣ್ಣತೆ?
ಪ್ರಥ್ವಿ ಪ್ರಪಂಚದ ಕಟ್ಟು ಮೆಟ್ಟಿ ದಿಗಂತದತ್ತ ಹರಿವ ಪ್ರೀತಿ,
ಕಾಲ ದೂರದಂತ ಮಿತಿಗೆ ಬೆದರಿ ಕುಗ್ಗಿ ನಡೆವುದೆ?
ನಮ್ಮ ಭಯದ ಬಲೆಯ ಹರಿದು, ಧೈರ್ಯದಿಂದ ನಡೆಯುವ.

ಎದ್ದು ಬಿದ್ದು ನಡೆಯುವಾಗ, ಸಹನೆ ಶಕ್ತಿ ಬೆಳೆಯುವಂತೆ,
ಬೆಂಕಿಯಲ್ಲಿ ಬೆಂದ ಚಿನ್ನ, ಮೆರುಗು ಕಡಿತಗೊಂಡ ವಜ್ರ
ಗರ್ಭಜಾತ ಹೊಳಪಿನಿಂದ ಬೆಂಕಿಯಂತೆ ಬೆಳಗುವಂತೆ,
ನಮ್ಮ ಬಂಧ ಸಾವಿರಾರು ಅಡ್ಡಿತಡೆಗಳ ಮೆಟ್ಟಿ ಜಿಗಿದು,
ರಕ್ತಸಿಕ್ತ ಕಣ್ಣೀರು ಬೆವರು ಧಾರೆಹರಿಸಿ ನಿಂತರೆನೆ
ಅದರಂತರ್ಗತ ಮೆರುಗು ಶಕ್ತಿ ಹೊರಗೆ ಸಿಡಿದು ¨ರುವುದು,
ಸೂರ್ಯನನ್ನು ನಾಚುವಂತ ಶುಭ್ರ ಬೆಳಕಲಿ ಹೊಳೆವುದು.

ಚಿನ್ನದಂತೆ ಉದಾತ್ತ ಭವ್ಯ, ವಜ್ರದಂತೆ ಅವಿಚ್ಛಿನ್ನ, ಕಠಿಣ,
ನಿನ್ನ ನನ್ನ ಪ್ರೀತಿಬಂಧ, ನಮ್ಮ ಬಿಗಿದ ಬ್ರಹ್ಮಗಂಟು;
ಬದುಕುಯೆಂಬ ಸಮುದ್ರದಲ್ಲಿ ಲಕ್ಷಲಕ್ಷ ತೆರೆಯ ಹೊಡೆತ
ತಿಂದು ತಿಂದು ಭದ್ರವೆಂದು ಸಿದ್ಧಗೊಂಡ ನಮ್ಮ ಬಂಧ,
ಕಣ್ಣುಕಟ್ಟುವಂತ ಕತ್ತಲೆ ಸಿಗಿದು ಹೊಳೆದ ನಮ್ಮ ನಂಟು,
ಬದುಕು ಬದುಕು ದಾಟಿ ದಾಟಿ ಭದ್ರವಾಗಿ ಹರಿಯುವಾಗ,
ಚಿಕ್ಕ ಪುಟ್ಟ ಅಡೆತಡೆಗೆ ಯಾಕೆ ನಾವು ನಲುಗಬೇಕು?
ನಮ್ಮ ನಂಟು ಪ್ರಥ್ವಿಮಿತಿಯ ಮೀರಿನಿಂತ ವಿಶ್ವಯಾನ,
ಕ್ಷಣಿಕ ಕಾಲದ ನೆಯಿಗೆಯಿಂದ ಹೊರಗೆನಿಂತ ಪ್ರಕ್ರಿಯೆಯು;
ಸ್ಠೃಷ್ಠಿ ಸ್ಫೋಟಗೊಂಡ ಕ್ಷಣವೆ ಹುಟ್ಟಿಕೊಂಡ ನಮ್ಮ ಪ್ರೀತಿ,
ವಿಶ್ವ ವಿಕಸನ ಹೊಯಿಲಿನಲ್ಲಿ ದಷ್ಟಪುಷ್ಟವಾಗಿ ಬೆಳೆದು,
ವಿಶ್ವಲಕ್ಷ್ಯದತ್ತ ಮುಂದೆ ವೇಗವಾಗಿ ನುಗ್ಗುವಾಗ,
ನಿನ್ನ ನನ್ನ ಸನಾತನತೆಯ ದಿವ್ಯ ಭರವಸೆ ನೀಡುವಾಗ,
ವಿಧಿಯ ಸಹಜ ಏರಿಳಿತಕೆ ಯಾಕೆ ನಾವು ಕೊರಗಬೇಕು?

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success