ಹೊಸ ದಾರಿ Poem by PRAVEEN KUMAR Kannada Poems

ಹೊಸ ದಾರಿ

ಕೊನೆಯಿಲ್ಲದ ಯಾನ, ಕೊನೆ ಕಾಣದ ದಾರಿ,
ನಡೆದಷ್ಟು ಹುಟ್ಟುತ್ತಿವೆ ಹಳ್ಳ, ಕೊಳ್ಳ, ಕೇರಿ,
ನಡೆದು ಬಳಲಿದ ಕಾಲು ಕುಸಿಯುತ್ತಿದೆ ಜಾರಿ;
ಹಳೆದಾರಿ, ಹಳೆಜಾಡು, ಹಳೆಕಾಡು ನೋಡಿ
ಮೊಂಡಾಗಿದೆ ಪಯಣದ ನವನವೀನತೆ ಮೋಡಿ.

ಮರುಭೂಮಿ ಮಾರ್ಗದಲಿ ಮರೀಚಿಕೆಗೆ ಹೆದರುವುದೆ?
ಕಾರ್ಮುಗಿಲು ಆಕಾಶದಲಿ ಮಿಂಚೆಂದರೆ ಬೆದರುವುದೆ?
ಅನುಭವಾನುಭವ ಮರೆತಾಗ ನಿರಾಶೆಯೆ ಗತಿಯೆ?
ತಾಮಸ ತಲೆ ಕವಿದಾಗ ಸಾತ್ವಿಕತೆಗೆ ತಿಲಾಂಜಲಿಯೆ?
ದೂರದಿಗಂತದಾಚಿಂದ ಮನ ಆಸರೆಯ ಕಾಯುತ್ತಿದೆ,
ಪ್ರಯಾಣದಾಹದಿ ದೇಹ ತೀರಸೇರಲು ಬಯಸುತ್ತದೆ.

ಹೊಸದಾರಿ ಹಿಡಿದು ಹಾಕುವೆ ಹೊಂದಾಣಿಕೆಯ ಹೆಜ್ಜೆ,
ಹೊಸದಿಕ್ಕು, ಹೊಸಹಕ್ಕು, ಹೊಸ ರಾಗಾವೇಗದ ಸೆಜ್ಜೆ,
ಹೊಸಾವೇಶ, ಕಾತುರ, ಮುನ್ನಡೆಯುವ ಹುಮ್ಮಸ್ಸು,
ನಡೆಸುವುದು, ನಡೆಸುವುದು, ನಡೆಸುವುದು ಮುಂದೆ,
ಗುಡ್ಡಕಾಡನು ದಾಟಿ ದಿಗಂತದಾಚಿಂದ ಹೊಸದಾರಿ
ಕೈಬೀಸಿ ಬಾಯೆಂದು ಕರೆಯುತ್ತಿದೆ ಮುಂದೆ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success