ಯಾತ್ರೆ Poem by PRAVEEN KUMAR Kannada Poems

ಯಾತ್ರೆ

ನೀನು ಒಳಗೆ, ನಾನು ಹೊರಗೆ,
ಇದೆಂತಹ ನ್ಯಾಯವು?
ನಮ್ಮ ಕೊರಗು ನೋಡಿ ಬೆರಗು
ಗೊಂಡಿವೆ ಪ್ರಪಂಚವು.

ದಿನ-ರಾತ್ರಿ ಬೆನ್ನು ಹಿಡಿದು
ಯುಗಯುಗಾಂತರ ನಡೆದರೂ,
ಸೂರ್ಯಚಂದ್ರ ಅಹೋರಾತ್ರಿ
ಹಿಂದೆಮುಂದೆ ಕುಣಿದರೂ
ಜೊತೆಜೊತೆಯಲ್ಲೆ ಇರುವುವು;
ಬಿಸಿಲುಮಳೆ ಬೆನ್ನುಬಿಡವು,
ಚಳಿಸೆಖೆ ಸರಣಿಬಿಡವು;
ಒಂದಕ್ಕೊಂದು ಪೂರಕ,
ಸಮತೋಲನ ಕಾರಕ.

ಸ್ನೇಹಪ್ರೀತಿ ಗಾಢಮೈತ್ರಿ
ನಿಸರ್ಗ ವೈಚಿತ್ರವು,
ಕೂಡುಬಯಕೆ ಮೆರೆಯುವಾಗ,
ಒಂದನ್ನೊಂದು ಬಯಸುವಾಗ,
ಕ್ಷಣಕ್ಷಣ ಬೆನ್ನುಹಿಡಿದು
ಯುಗಯುಗಾಂತರ ನಡೆದರೂ
ನಿಸರ್ಗಚಕ್ರ ಪ್ರಕ್ರಿಯೆಬಿಟ್ಟು
ಮತ್ತಿನ್ನೇನೂ ನಡೆಯದು;
ರಂಗಭೂಮಿ ಕಲಾವಿದರು
ಚಕ್ರದೊಳಗಿನ ಚಕ್ರವಾಗಿ,
ಚಕ್ರವ್ಯೂಹದೊಳಗೆ ಸೊರಗಿ
ನಟಿಸಿನಟಿಸಿದಷ್ಟು, ಬಿಟ್ಟು,
ಮತ್ತಿನ್ನೇನೂ ಘಟಿಸದು.

ನಿಸರ್ಗವೊಂದು ದೊಡ್ಡ ಯಂತ್ರ,
ಉಳಿದುದೆಲ್ಲ ಅದರ ತಂತ್ರ;
ನೀನುನಾನು, ಸ್ನೇಹಪ್ರೀತಿ
ನಿಸರ್ಗಕ್ರಿಯೆಯ ಶಕ್ತಿ ರೀತಿ.

ಬಯಸಿಬಯಸಿ, ಲಕ್ಷ್ಯ ಮರೆತು,
ಕಾಲಾಂತರದ ಕ್ರಮಣ ಮರೆತು
ಹಿಂದೆಮುಂದೆ ನಡೆವುದೊಂದೆ
ಪ್ರೀತಿಸ್ನೇಹದ ಹಿರಿ ಲಕ್ಷಣ;
ಮಿಲನದಲ್ಲಿ ಚಲನೆಯಿಲ್ಲ,
ಕೂಟದಲ್ಲಿ ಮಾಟವಿಲ್ಲ;
ಸಾಮರಸ್ಯ ಜೀವಶಕ್ತಿಯಲ್ಲ,
ಅಸಮತೋಲನ ಜೀವನ;
ನೀನು ಒಳಗೆ, ನಾನು ಹೊರಗೆ,
ಪ್ರೀತಿಸ್ನೇಹದ ಲಕ್ಷಣ;
ನಿನ್ನ ನಾನು, ನನ್ನ ನೀನು
ಉಕ್ಕಿಬರುವ ಬಯಕೆಯಿಂದ
ಕಾಲಕೋಲ ಮರೆತುಬಿಟ್ಟು
ಬೆನ್ನುಹತ್ತಿ ಓಡುವುದು
ನಮ್ಮ ವಿಧಿ ಲಕ್ಷಣ.

ನಿಸರ್ಗನಿಯಮ ಮನಸಲಿಟ್ಟು,
ನಮ್ಮ ಪ್ರೀತಿ ನಮ್ಮಲ್ಲಿಟ್ಟು,
ಕಣ್ಣುಬಾಯಿ ಮುಚ್ಚಿರುವ
ನಮ್ಮ ಯಾತ್ರೆ ನಡೆಸುವ.

COMMENTS OF THE POEM
READ THIS POEM IN OTHER LANGUAGES
Close
Error Success