ಏನು ಸೆಖೆ, ಎಂಥ ಧಗೆ,
ದಗದಗಿಸುವ ಸೂರ್ಯನು,
ಆಕಾಶದಿಂದ ನೆಲದವರೆಗೆ
ಬೆಂಕಿ ಕಾರುವ ಸ್ತಬ್ಧತೆ;
ಸ್ಥಂಭೀಭೂತ ಗಾಳಿ ಕೂಡ
ಇದ್ದಲ್ಲೆ ನಿಂತುಕೊಂಡು,
ಬಿಸಿಲಿನೊಂದು ವ್ಯೂಹ ಬಿಗಿದು,
ಕಂಡದ್ದೆಲ್ಲ ಒಳಗೆ ಒಗೆದು
ರಣರೌರವ ತಂದಿದೆ.
ಹೃಸ್ವಗೊಂಡ ಉತ್ಸುಕತೆ,
ಕುಸಿದುಬಿದ್ದ ಉದ್ಯಮತೆ,
ಏನೋ ಜಡತೆ ಎಲ್ಲ ಕಡೆ,
ನಿದ್ರಾವಸ್ಥೆಯ ಅನುಭವ;
ಇದ್ದುಬಿದ್ದ ಶಕ್ತಿಯನ್ನು
ಹೀರಿಕುಡಿವ ಬಿಸಿಲುಧಗೆ
ಪಿಶಾಚಿಯಂತೆ ಬಾಯಿತೆರೆದು,
ಕಂಡಲ್ಲೆಲ್ಲ ಬೆಂಕಿಯುಗುಳಿ
ಭೂಮಿ ಸ್ಮಶಾನಗೊಳಿಸಿದೆ.
ಮುಟ್ಟಿದ್ದೆಲ್ಲ ಬಿಸಿ ಬಿಸಿ,
ಮನಸ್ಸಲ್ಲೇನೋ ಕಸಿವಿಸಿ,
ಮೈಯ ತುಂಬ ಬೆವರುಧಾರೆ;
ಇದ್ದುದನ್ನು ಅಲ್ಲೇ ಬಿಟ್ಟು
ಎಲ್ಲೋ ಅಡಗುವ ಚಪಲತೆ;
ಸೂರ್ಯನೇನೋ ಸಿಟ್ಟುಗೊಂಡು
ಸಿಟ್ಟ ಹೊರ ಉಗುಳುವಂತೆ,
ಶಪಿತಗೊಂಡ ವಾತಾವರಣ
ಹೃಸ್ವ ಕ್ಷುದ್ರಗೊಂಡಿದೆ.
ಶಿವನ ನೇತ್ರ ತ್ರಯದ ರೀತಿ
ಸೂರ್ಯ ಬೆಂಕಿಯುಗುಳುವಾಗ,
ಅಣುವಿನಿಂದ ಪ್ರಾಣತನಕ
ಎಲ್ಲ ಉರಿಯಲಿ ಉರಿಯುವಾಗ,
ತಲೆಗೆ ಸೂರು ಸಿಗದಾದಾಗ
ಸಹನೆಯೊಂದೆ ಉಳಿದ ದಾರಿ;
ಬಂದದಮೃತವೆಂದು ತಿಳಿದು,
ಬಿಸಿಲುಬೇಗೆಯಲ್ಲಿ ಮಿಂದು
ಪಾಪತಾಪ ಸಹಿಸಬೇಕು.
ಕಾಲಚಕ್ರ ಸೃಷ್ಠಿ ನಿಯಮ,
ಹೊಸತುಲೋಕ ಬರಲೆ ಬೇಕು;
ಇದ್ದುದನ್ನು ಸಹಿಸಿಕೊಂಡು
ಹೊಸತಿಗಾಗಿ ಕಾಯಬೇಕು;
ಎಲ್ಲೂ ಏನೂ ಸ್ಥಿರವಾಗಿಲ್ಲ,
ಚಲನೆಯೊಂದೆ ಸತ್ಯವು;
ಬಿಸಿಲುಬೇಗೆ ಕಳೆದ ಮೇಲೆ
ಮಳೆ ಚಳಿ ಬರಲೆಬೇಕು,
ಇದು ಸೃಷ್ಠಿಯ ನಿಯಮವು.
ಇದ್ದುದಕ್ಕೆ ಮೈಯಕೊಟ್ಟು,
ಒಳ್ಳೆತನಕೆ ಮನಸುಬಿಟ್ಟು
ಹೊಸತಿಗಾಗಿ ಕಾಯುವವರು,
ಹೊಸ ಪ್ರಪಂಚ ನಿರೀಕ್ಷೆಯಲ್ಲಿ
ಇದ್ದ ನೋವು ಮರೆಯುವವರು,
ಬಂದದ್ದೆಲ್ಲ ಬರಲಿಯೆಂದು,
ಅದಕೆ ನಾವು ಬದ್ಧರೆಂದು
ತಗ್ಗಿಬಗ್ಗಿ ನಡೆವುದೊಂದೆ
ಅನುಭವಸ್ಥ ಪರಿಜ್ಞಾನವು.
This poem has not been translated into any other language yet.
I would like to translate this poem