ವಿಧಿ Poem by PRAVEEN KUMAR Kannada Poems

ವಿಧಿ

ಕಟ್ಟಿದ ತೋರಣಗಳು ಕಳಚಿಬಿದ್ದಿವೆ,
ವಾಲಗ ಸದ್ದುಗದ್ದಲ ಸ್ಥಬ್ದ್ಹವಾಗಿವೆ,
ಮದುವೆಯ ಮನೆ ಈಗ ಪಾಳುಬಿದ್ದಿದೆ,
ಮದುವಣಗಿತ್ತಿ ಕಾಣದೂರಿನ ಕತ್ತಲೆಯಲ್ಲಿ
ಹಿಂಗಿದ ಕಂಬನಿಯ ಕಣ್ಣಲ್ಲಿ ಎಲ್ಲ ಮರೆತು
ಕಾಲದ ಗಣನೆಯಲ್ಲಿ ದೂರಕ್ಕೆ ದೃಷ್ಟಿನೆಟ್ಟು
ಕಾಣದ ಭರವಸೆಯಲ್ಲಿ ಬದುಕಿದ್ದಾಳೆ ಇನ್ನೂ.

ಹೇಗೆ ಹುಟ್ಟಿದ ಕತೆಗೆ ಇದೆಂತಹ ಅಂತ್ಯ,
ಆಕಾಶಕ್ಕೆ ಹಾರುವಾಗ ಪಾತಾಳಕ್ಕೆ ಪ್ರಪಾತ,
ವೈಭವದ ನಾಗಾಲೋಟಕ್ಕೆ ಅವನತಿಯ ಬಿಗಿತ,
ಮನುಷ್ಯ ಬಗೆದುದರ ಮೇಲೆ ವಿಧಿಯ ತಿವಿತ;
ಉಳಿದಿರುವುದೀಗ ಬರಿಯ ಪಳೆಯುಳಿಕೆ ಮಾತ್ರ,
ಪ್ರಕೃತಿಯ ವಿಧಿವಿಧಾನದ ಪ್ರವೃತ್ತಿ ವಿಚಿತ್ರ,
ಈಗ ವೈಭವದ ವಿಜೃಂಭಣೆಯ ಲವಲೇಶವಿಲ್ಲ.

ಅಂದಿನ ಸದ್ದುಗದ್ದಲದ ಆ ಕತೆಯೇ ಬೇರೆ;
ಪ್ರೀತಿಪ್ರೇಮದ ಆ ದಿವ್ಯ ಚೌಕಟ್ಟಿನಲ್ಲಿ
ನಾವು ಆಡಿದ್ದೇ ಆಟ, ಸವಿಕನಸುಗಳ ಓಟ,
ನಮ್ಮರಮನೆಯಲ್ಲಿ ನಾವಿಟ್ಟದ್ದೇ ಕಟ್ಟಳೆ;
ನಮ್ಮನ್ನು ಮೀರಿದ ಲೋಕವಿಲ್ಲವೆಂದುಕೊಂಡು
ನಮ್ಮಿಬ್ಬರಲ್ಲೇ ಸುಖದುಃಖಸಾರ್ಥಕ್ಯ ಕಂಡ
ನಿಷ್ಕಲ್ಮಶ ಸರಳ ಪ್ರೇಮಿಗಳು ನಾವು.

ಅವಳಲ್ಲೇ ಜೀವನದ ಸಾರ್ಥಕ್ಯ ಕಂಡೆ,
ಅವಳ ಬಳಿಯಲ್ಲಿ ನಾನು ನನ್ನನ್ನೇ ಮರೆತೆ;
ಅವಳಾದರೋ ದಿನಒಂದೂ ನನ್ನಿಂದ ದೂರ
ಇರಲಾಗದೆ ಚಡಪಡಿಸಿದ ದಿನಗಳೆಷ್ಟೋ?
ಅವಳೇ ನನ್ನಾರಾಧನೆ, ದೇವಿರಾಣಿಯೆಂದು,
ಅವಳಿಗೆ ಈ ಜೀವ ಸದಾ ಮುಡಿಪುಯೆಂದು
ನನ್ನನ್ನವಳಿಗೆ ನಾನು ಅರ್ಪಿಸಿಕೊಂಡಿದ್ದೆ.

ಅವಳೋ ದಿವ್ಯದೀಪ, ದಿವ್ಯತೆಯ ಶೋಭ,
ಸೌಗಂಧ ಚೆಲ್ಲುವ ಮಲ್ಲಿಗೆಯ ಪ್ರತಿರೂಪ,
ವಜ್ರ ದೃಢತೆಯ ಸುಂದರ ವರ್ಣಪಟಲ;
ಬೆಳದಿಂಗಳ ತಂಪು, ಸೂರ್ಯನ ಹೊಳಪು,
ಸುತ್ತುಮುತ್ತಲು ಸ್ನೇಹದ ತಂಗಾಳಿ ಚೆಲ್ಲಬಲ್ಲ
ನನ್ನವಳು ಜೇನಿನಂತೆ ಸಿಹಿ, ಹಿತಕಾರಿ,
ಕೆಟ್ಟದ್ದನ್ನೆಂದೂ ಯಾರಿಗೂ ಬಗೆವವಳಲ್ಲ.

ನಾವಿಬ್ಬರೂ ಕಂಡ ಕನಸುಗಳೆಷ್ಟೋ?
ನಮ್ಮಿಬ್ಬರ ಸುಖಸ್ಪರ್ಷದ ನೆನಪುಗಳೆಷ್ಟೋ?
ಅವೆಲ್ಲ ಕಾಲದ ವ್ಯತಿರಿಕ್ತ ಗತಿಯಿಂದ
ಈಗ ಬರಿ ಯಾತನೆ, ನೋವಾಯಿತಲ್ಲ!
ನಿಷ್ಕಲ್ಮಶ ಅವಳು, ನಾನೂ ನಡೆದದ್ದು ಸರಿ,
ಆದರೆ ವಿಧಿಗೆ ಇದು ಬಹಶಃ ಬೇಕಾಗಿರಲಿಲ್ಲ,
ಕಟ್ಟಿದ ಸೌಧ ಸೊಯ್ಯನೆ ಧರೆಗುರುಳಿ ಬಿತ್ತು.

ಕನಸ್ಸನೇನೋ ಕಟ್ಟುವುದು ಮನುಷ್ಯನ ಬಯಕೆ,
ಅದನ್ನು ಹಿಡಿದು ನಿಲ್ಲಿಸುವುದು ವಿಧಿಯ ಆಯ್ಕೆ;
ಕನಸಿನ ಸೌಧ ಉರುಳಿಬಿತ್ತು, ಆಶೆಗಳು ಸತ್ತು
ಉಳಿದಿರುವುದೀಗ ಬರೇ ನೋವು, ನಿರಾಶೆ, ಬೇನೆ,
ಆದರೂ ಒಳಗೊಳಗೇ ಏನೋ ಆಶೆ, ಹೊಳಪು, ಬೆಳಕು -
ಕಟ್ಟಿದ ಗುಡಿಯೇನೋ ಉರುಳಿ ದೊಪ್ಪನೆ ಬಿತ್ತು,
ಆದರೂ ಗರ್ಭಗುಡಿಯಲ್ಲಿ ಪ್ರೀತಿ ಉಸಿರಾಡುತ್ತಿದೆ ಇನ್ನೂ.

COMMENTS OF THE POEM
READ THIS POEM IN OTHER LANGUAGES
Close
Error Success