ನನ್ನದೆಂಬುವುದು ಒಂದೂ ಇಲ್ಲ Poem by PRAVEEN KUMAR Kannada Poems

ನನ್ನದೆಂಬುವುದು ಒಂದೂ ಇಲ್ಲ

ಇಲ್ಲಿ ನನ್ನ ಜೀವನದಲ್ಲಿ ನನ್ನದೆಂಬುವುದು ಒಂದೂ ಇಲ್ಲ,
ಎಲ್ಲೋ ಯಾರೋ ನಿರ್ಧರಿಸಿದ ನಿರ್ದೇಶಿಸಿದ ನಾಟಕ ಎಲ್ಲ;
ಎಲ್ಲಿ ಯಾರಲ್ಲಿ ಯಾವಾಗ ಹುಟ್ಟಬೇಕೆಂದು ಯಾರೂ ಕೇಳಲಿಲ್ಲ,
ಹುಟ್ಟಿದ ಮೇಲೆ ಏನು ಹೇಗೆಂದು ಯಾರೂ ನನಗೆ ಹೇಳಲಿಲ್ಲ;
ಕಣ್ಣು ಮುಚ್ಚಿಕೊಂಡೆ ನಾನು ಎಲ್ಲೋ ಹೇಗೋ ಮುಂದೆ ನೆಗೆದು ಬಂದೆ,
ಯಾಕೆ ಯಾರಿಂದಯೆಂದು ನನಗಿನ್ನೂ ಒಂದೂ ತಿಳುವಳಿಕೆಯಿಲ್ಲ;
ಕಾಲಬದಲಾದಂತೆ ಹಿಂದೆಮುಂದೆ ಬದಿಯಿಂದ ಏನೋ ನೂಕಿದಂತೆ,
ಕೈಲಾಗದವನಂತೆ ನಾನು ನೂಕುನುಗ್ಗಲಲ್ಲಿ ಮುಂದೆ ಸವರಿಬಿದ್ದಂತೆ
ನೆನಪು ಬಿಟ್ಟರೆ ನನಗೆ ನನ್ನ ಬಗ್ಗೆ ಏನು ಯಾಕೆಂದು ಒಂದೂ ತಿಳಿದಿಲ್ಲ.

ಕಾಣದ ಕೈಯೊಂದು ನನ್ನ ನಡೆಸಿತು ಮುಂದೆ,
ಕಾಣದ ಮಡಿಲಲ್ಲಿ ನಾನು ಬೆಳೆದು ನಿಂತೆ,
ಹೆಜ್ಜೆಹೆಜ್ಜೆಯಲ್ಲೂ ಏನೋ ನಿಂತು ಹಿಂದೆ,
ಎಡಬಲ ನಡೆಸಿತು ಸಂಚಾರಿ ಪೊಲೀಸರಂತೆ.

ಕನಸಲ್ಲಿ ನಗುವ ತೊಟ್ಟಿಲ ಶಿಶುವಿನ ತಿಳಿಯದ ಬಯಕೆಯಂತೆ
ನಾನೇನೇನೋ ಬಯಸಿ ಮುಂದೆ ತೊದಲುಹೆಜ್ಜೆ ಹಾಕಿದ್ದುಂಟು,
ಮರುಕ್ಷಣದಲ್ಲೆ ಮತ್ತೇನೋ ಬಂದು ಹೆಜ್ಜೆ ಬದಲಿಸಿದ್ದುದುಂಟು;
ನನ್ನ ಮೋಟಾರುಗಾಡಿಯ ಚುಕ್ಕಾಣಿ ಚಕ್ರ ನನ್ನ ಕೈಯಲ್ಲೆ ಇಲ್ಲ,
ಹರಿವ ಹಳ್ಳದ ಮೇಲಿನ ತರಗೆಲೆಯಂತೆ ನನ್ನ ಜೀವನ ಎಲ್ಲ,
ಮುಂದೇನು ಎಲ್ಲಿ ಹೇಗೆಂಬ ಅರಿವು ನನಗೆ ಸ್ವಲ್ಪವೂ ಇಲ್ಲ;
ಯಾಕಿರುವೆ, ಯಾಕೆ ಎಲ್ಲಿಂದ ಬಂದೆನೆಂದು, ಮತ್ತೆಲ್ಲಿಗೆ ಪಯಣ,
ಯಾವದಿನ ಕಟ್ಟಿಟ್ಟ ಬುತ್ತಿ ಬಿಟ್ಟು ಮತ್ತೆ ಎಲ್ಲೋ ಹಿಂದೆ ಪಯಣ,
ನನಗದರ ಅರಿವು ಪರಿಜ್ಞಾನ ಒಳನೋಟ ಕಿಂಚಿತ್ತೂ ಇಲ್ಲ.

ಸೂತ್ರಗೊಂಬೆಯೋ ನಾನು, ಕೀಲಿಕೊಟ್ಟಿಟ್ಟ ಗೊಂಬೆ?
ಕೈಕಾಲಾಡಿಸಲೆಂದೆ ನಾನು ಈ ಜೀವನಕೆ ಬಂದೆ?
ಮುಂಚಲಿಸುವ ನನ್ನ ಆ ಗುಪ್ತ ಚಾಲಕನು ಯಾರು?
ಇದಿಷ್ಟನ್ನೂ ತಿಳಿಯುವ ಯೋಗ್ಯತೆ ನನಗಿಲ್ಲವೇನು?

ಯುಗಯುಗಾಂತರವೀ ಸತ್ಯ ತಿಳಿದಿರುವ ಕೋಟಿಕೋಟಿ ಜನ,
ಸರ್ವಜ್ಞರಂತೇಕೆ ಮತ್ತೆಮತ್ತೆ ಕಪಟತಂತ್ರ ಹೆಣೆಯುವರು?
ವಿವಿಧ ಧರ್ಮಗ್ರಂಥ ಸತ್ಯಗಳೆಂದು ಜಾತಿಗೀತೆ ಹರಡುವರು?
ಪುಟ್ಟ ಬೆಳಕುಗಳೇನೋ ತಂದು ಚಿಕ್ಕಪುಟ್ಟ ತೃಪ್ತಿ ಚೆಲ್ಲುವುದು;
ತೃಪ್ತಿಯೇ ಸತ್ಯವಲ್ಲ, ಪುಟ್ಟ ದೀಪ ಸೂರ್ಯನ ಸರಿಗಟ್ಟುವುದಿಲ್ಲ,
ನಮ್ಮಿರವಿನ ಸತ್ಯದ ಸೂರ್ಯನಿಗೆ ಹಿಡಿದಿದೆ ಶಾಶ್ವತ ಗ್ರಹಣ,
ಕತ್ತಲನ್ನೇ ಬೆಳಕೆಂದು ತಿಳಿದು ತೃಪ್ತರಾಗುವವರು ನಾವು;
ಇದೂ ನಮ್ಮನ್ನಾಡಿಸುವಜ್ಞಾತ ಕೈಯ ಕಪಟನಾಟಕವೇನೋ,
ಈ ಸತ್ಯಾಸತ್ಯತೆಯನ್ನು ಕೈಲಾಗದ ನಾವು ಗ್ರಹಿಸಬೇಕಷ್ಟೆ.

COMMENTS OF THE POEM
READ THIS POEM IN OTHER LANGUAGES
Close
Error Success