ನಮ್ಮ ಪ್ರೀತಿ Poem by Praveen Kumar in Divya Belaku

ನಮ್ಮ ಪ್ರೀತಿ

ನೀನು ನಾನು ಬೇರೆಯಲ್ಲ,
ನಮ್ಮ ಪ್ರೀತಿ ಸಣ್ಣದಲ್ಲ;
ನಾನು ನಿರ್ಬಲನಾದರೂ,
ನೀನು ನಿಷ್ಕ್ರಿಯಳಾದರೂ,
ನಮ್ಮ ಪ್ರೀತಿ ದೊಡ್ಡ ಶಕ್ತಿ;
ನಮ್ಮ ಕೂಡು ಪ್ರಖರ ಶಕ್ತಿ,
ದಿವ್ಯ ದೈವ ಚೇತನ.

ನಾನೆಲ್ಲೋ ಇಲ್ಲಿ ಹೀಗಿರುವಾಗ,
ನೀನೆಲ್ಲೋ ಅಲ್ಲಿ ಹಾಗಿರುವಾಗ,
ಕಣ್ಣುಕಿವಿ ಮೀರಿರುವ ಒಂದು
ದಿವ್ಯಶಕ್ತಿ ಮಧ್ಯೆ ನಿಂದು
ಸೇತುಬಂಧ ಬಿಗಿದುಬಿಟ್ಟು,
ಪ್ರೀತಿ ರಾಜಮಾರ್ಗ ಕೊಟ್ಟು
ನಮ್ಮನ್ನೊಂದುಗೈದಿದೆ.

ನೀನೇನೆಂದು ನಾನು ಬಲ್ಲೆ,
ನಾನೇನೆಂದು ನೀನು ಬಲ್ಲೆ,
ನಮ್ಮ ಮಧ್ಯಜ್ಞಾತವಿಲ್ಲ,
ನಮ್ಮ ಮಧ್ಯೆ ಭೇದ ಸಲ್ಲ;
ಬಾರೆ ಚೆಲುವೆ, ಹಕ್ಕಿಯಾಗಿ,
ಅದೃಶ್ಯ ಲೋಕದಲ್ಲಿ ಬೀಗಿ
ನಾವು ನಾವಾಗಿ ಸುಖಿಸುವ.

ನಮ್ಮ ದೂರ ಸ್ವಲ್ಪವಲ್ಲ,
ನಮ್ಮ ದುಃಖ ದೇವರೆ ಬಲ್ಲ;
ನಮ್ಮ ಭೇದ ಹರಿತವನ್ನು
ಮೀರಿದಂತ ರಕ್ಷೆಯನ್ನು
ನಮ್ಮ ಪ್ರೀತಿ ಕೊಟ್ಟಿರುವಾಗ,
ಕೊಂಡಿಯಾಗಿ ಕಟ್ಟಿರುವಾಗ
ನಮಗದೇಕೆ ಚಿಂತೆಯು?

ಕಾಲ ಮೀರಿದ ಮದ್ದು ಇಲ್ಲ
ವಿಧಿಯ ಬ್ರಹ್ಮ ಎಲ್ಲ ಬಲ್ಲ;
ಕಾಲಕ್ರಮಣದಲ್ಲಿ ನಾವು
ಮತ್ತೆ ಜೊತೆ ಸೇರುವೆವು;
ತಾಳ್ಮೆಬೇಕು ಪ್ರೀತಿಯಲ್ಲಿ,
ಬಿರುಕುಯಿಲ್ಲ ಪ್ರೀತಿಯಲ್ಲಿ
ಸಹನೆಯಿಂದ ಬದುಕುವ.

ಏನೋ ಶಂಕೆ ನಮಗೆ ಸಹಜ,
ಗಾಢಪ್ರೀತಿಯಿಂದದರ ಬೀಜ;
ಶಂಕೆ ಬಿಡು, ದೃಢತೆಯಿಂದ,
ನಮ್ಮಂತಸ್ಥ ವಿಶ್ವಾಸದಿಂದ,
ನಿನಗೆ ನಾನು, ನನಗೆ ನೀನು,
ನಮ್ಮ ಬಿಟ್ಟು ಬೇರಿಲ್ಲ ಏನೂ
ಎಂಬ ಧೈರ್ಯದಿ ಬದುಕುವ.

ನೀನು ನಾನು ಕೂಡಿದಾಗ,
ಲೋಕವೆಲ್ಲ ಸುಂದರ,
ನಿನ್ನನನ್ನ ಜೀವನದಲ್ಲಿ
ಲೋಕ ಹೂವಿನ ಹಂದರ;
ಸುಖಚೆಲುವು ಜೊತೆಯಾದಾಗ,
ಸತ್ಯಲೋಕವು ಸ್ಫುರಿಸುವಾಗ
ನಾವೇ ನಿಜ ದೇವರು.

ದೂರದಲ್ಲಿ ಎಲ್ಲ ಕನಸು;
ಅರಳಿದಾಗ ನಮ್ಮ ನೆನಸು,
ಅದುವೆ ಸತ್ಯ ಜೀವನ,
ನಮ್ಮ ಪ್ರೀತಿಗೆ ಪ್ರೇರಣ;
ಅದರ ಸವಿ ನಿರೀಕ್ಷೆಯಲ್ಲಿ
ದಿನರಾತ್ರಿ ಕಳೆಯುವಲ್ಲಿ
ನನಗದೇನೋ ಸಂಭ್ರಮ.

ನಮ್ಮ ದಿನ ಬರಲಿಯೆಂದು,
ಬೇಗ ನಮ್ಮ ಬಿಗಿಯಲೆಂದು,
ನಾವೆಷ್ಟು ಅತ್ತು ಕರೆದರೂ,
ಕಾಲನನೆಷ್ಟು ಮೊರೆಹೋದರೂ,
ಕಾಲನಿಯಮ ಮೀರಿ ಒಂದೂ
ಎಂದೂ ಎಲ್ಲೂ ನಡೆಯದು,
ನಮ್ಮ ಆಶೆ ಫಲಿಸದು.

ನಿನ್ನ ನನ್ನ ಪ್ರೀತಿ ಒಂದು
ದೈವದತ್ತಾಶೀರ್ವಾದವು;
ನಿನ್ನನನ್ನ ಇರುವ ದೂರ
ದೈವದತ್ತಾಭಿಶಾಪವು;
ವಿಧಿಯು ಕೊಟ್ಟಷ್ಟೆ ಕಾಲುಚಾಚಿ,
ಇದ್ದುದನಷ್ಟೆ ಆದಷ್ಟು ಬಾಚಿ
ಸುಖಸಂತೃಪ್ತಿ ಕಾಣುವ.

READ THIS POEM IN OTHER LANGUAGES
Close
Error Success