ನನ್ನಾತ್ಮ ನಂದಾದೀಪ Poem by Praveen Kumar in Bhavana

ನನ್ನಾತ್ಮ ನಂದಾದೀಪ

ಎಲ್ಲಿಂದಲೋ ಸುತ್ತಿಬಳಸಿ ಹರಿದು
ಸಾವಿರ ಶಿಖರದೆತ್ತರ ಹತ್ತಿಯಿಳಿದು
ಸುರಗಂಗೆಯಂತೆ ಧುಮುಕಿ ಬಂದೆ,
ನನ್ನ ಹೃದಯದ ಸಾಮ್ರಾಜ್ಞಿಯಾದೆ.

ನೀನು ಹೇಳಿ ಕೇಳಿ ನನ್ನ ಬಳಿ ಬಂದವಳಲ್ಲ,
ಸುತ್ತನೋಡಿ ಕೂಡಿಕಳೆದು ನಿಶ್ಚಯಿಸಿದ್ದಲ್ಲ;
ಒಳಗೊಳಗಿನ ಸುಪ್ತ ಒರತೆಯ ದಿಕ್ಕಿನಲ್ಲಿ
ನನ್ನೊಳಗೆ ಸ್ಫುರಿಸಿಯೆ ನನ್ನ ತಬ್ಬಿಕೊಂಡೆ.

ನಾನೋ ಬೆಳಕಾರಿದ ನಂದಿದ ದೀಪ,
ಸ್ವರಮಿಳಿತಗೊಳ್ಳದ ಇಂಪಿಲ್ಲದಾಲಾಪ;
ದ್ವಜಾರೋಹಿಸಿದ ದೇವಾಲಯದಂತೆ
ನಿನ್ನಾಗಮನದಲ್ಲೆ ಪೂಜೆಪುರಸ್ಕಾರ ಕಂಡೆ.

ಏನೋ ವೇದಘೋಷ ಸಂಗೀತದ ಹೊನಲು,
ಗಂಟೆನಿನಾದ, ಬೆಳಕು, ವಾದ್ಯ, ಕೊಳಲು
ಆತ್ಮದೊಳಗೆನೆ ಹಾಡಿದ ಸಂವೇದನೆ ಒಳಗೆ,
ನಿನ್ನಿರವು ನನಗೆ ಹರಿದು ಬಂದಾಗ ಬಳಿಗೆ.

ನನ್ನಾತ್ಮ ನಂದಾದೀಪ ನೀನು ಬೆಳಗಿಸಿಬಿಟ್ಟೆ,
ಆತ್ಮದೊಳಗೊಂದು ಗರ್ಭಗುಡಿ ಕಟ್ಟಿಬಿಟ್ಟೆ;
ದಿನರಾತ್ರಿ ಬಿಡದೆ ಪ್ರೀತಿಪೂಜೆ ಶಂಖಘೋಷ
ಬೆಳಕಿನ ಬೆಳಕಾಗಿ ನನ್ನೊಳಗೆನೆ ನಾನು ಕಂಡೆ.

ನಿರ್ವಾತದಿಂದ ನೀನು ಜಿಗಿದು ಹರಿದು ಬಂದವಳಲ್ಲ,
ನಿನ್ನ ತುಂಬುಮಡಿಲನ್ನು ತೊರೆದು ಒಲಿದು ಬಂದೆ;
ಅಕ್ಕಪಕ್ಕ ದೂರ ಹತ್ತಿರ ನಾಳೆ ನೀನು ನೋಡಲಿಲ್ಲ,
ಕಂಡಾಕ್ಷಣ ಮಿಂಚಾಗಿ ಮಿಂಚಿ ಓಡಿ ನನ್ನ ಸೇರಬಂದೆ.

ವಿರಕ್ತನಂತಿದ್ದ ನನ್ನ ಸಮ್ಮತಿ ನೀನು ಕೇಳಲಿಲ್ಲ,
ನನ್ನೊಳಗೆ ತೆರವೆಷ್ಟೆಂದು ನೀನು ತಿಳಿಯಲಿಲ್ಲ;
ಬಂದೆ, ನೋಡಿದೆ, ಜಿಗಿದು ಒಳಗೆ ನುಗ್ಗಿ ಬಂದೆ,
ನಾನವಕ್ಕಾಗಿ, ಕ್ಷಣದಲ್ಲಿ ನನ್ನ ಬಾಗಿಲು ತೆರೆದೆ.

ನನ್ನಾತ್ಮದ ದೇವಿ, ದೇವಾಲಯ ನೀನು,
ನಿನ್ನ ತಪಸ್ಸಲ್ಲೆ ಮೈಮರೆತ ಭಕ್ತ ನಾನು;
ಬೆರೆತಾತ್ಮಗಳ ತಪಸ್ಸು ಕೂಡಿ ಬೆರೆತಾಗ
ನೀ ನಿನ್ನನ್ನೆ ಮರೆತೆ, ನನ್ನೊಳಗೆ ಬೆರೆತೆ.

ಅಕಲ್ಮಶ ಪ್ರೀತಿಯ ಉತ್ತುಂಗತೆ ನೀನು,
ಅದರ ಪುಣ್ಯರುಚಿಯುಂಡ ಭಾಗ್ಯ ನನದು;
ಯುಗಯುಗಾಂತರ ಮೀರಿ ನೀನು ನಾನು
ಈ ಪ್ರೀತಿ ಬಂಧದಲೆ ಮೆರೆಯುವುದು ಸತ್ಯ.

READ THIS POEM IN OTHER LANGUAGES
Close
Error Success